Sunday 31 August 2014

ಜಾತಿ ಗೀತಿ

ಪ್ರತೀ ಸಂಜೆ ನಾವೊಂದು ನಾಕೈದು ಜನ ಗೆಳೆಯರು, ಊರ ಹೊರಗೆ ಹರಿಯೊ ನಾಲೆ ಕಟ್ಟೆ ಮೇಲೆ ಕೂರೊ ಅಭ್ಯಾಸ ಮಾಡ್ಕೊಂಡಿದ್ದೊ. ಅಲ್ಲಿ ತಲೆ ಬುಡ ಇಲ್ಲದ ಹತ್ತಾರು ಹರಟೆಗಳ ಜೊತೆ ಕಂಡೋರ ಮನೆ ವಿಚಾರಾನೂ ಮಾತಾಡ್ತಿದ್ವಿ, ಮಿಕ್ಕಂತೆ ಹಸಿ ಬಿಸಿ ಚರ್ಚೆ ಮಾಮೂಲು, ಹಿಂಗೆ ಮಾತಾಡೊ ನಾವು ನಾಕೈದು ಜನರ ಜೊತೆಗೆ ಆಗಾಗ ಸೇರ್ಕೋತಿದ್ದ ಒಬ್ಬ,  ಮಡಿವಾಳರ ಜಾತಿಗೆ ಸೇರ್ದೋನು ಅಂತ ಗುರ್ತಾಗಿದ್ದ. ಅವನ ಜೊತೆ ಮಾತಾಡ್ತ ಅವನ ಜಾತಿಯನ್ನ ಹೆಸರಿಸಿ ಅವನನ್ನ ಢೋಬಿ ಅಂತ ಕರೀತಿದ್ರು, ನನಗದು ಇರುಸು ಮುರುಸಾಗ್ತಿತ್ತು, ಹೇಳಿದ್ರೆ ಕೇಳೋರಲ್ಲ ನಮ್ ಜನ.

ಇನ್ನೊಂದೇನಂದ್ರೆ, ಈ ಒಕ್ಕಲಿಗ ಅನ್ನಿಸ್ಕೊಂಡೋರ್ ಮನೆ ಎದ್ರುಗೆ ಆ ಮಡಿವಾಳ ಅಂತ ಕರೆಯಲ್ಪಡುತ್ತಿದ್ದವರ ಮನೆ ಇದ್ರೆ ಈ ಒಕ್ಕಲಿಗರ ಮನೆ ಹಾಳಾಯ್ತದಂತೆ.
 ಒಂದು ಸಾವಾದ್ರೆ, ಒಂದು ಹಸು ಖಾಯಿಲೆಗೆ ತುತ್ತಾದ್ರೆ, ಅಥವಾ ಸತ್ತೋದ್ರೆ, ಬೆಳೆ ಕೈ ಕೊಟ್ರೆ, ಈ ತರಹದ ಎಲ್ಲದಕ್ಕೂ ಇವರ ಮನೆ ಎದುರಿರುವ ಅವರ ಮನೆಯನ್ನ ಹೊಣೆ ಮಾಡ್ತಾ ಇದ್ರು, ಈ ಮಾತು ಕತೆ ವಿಚಾರಗಳನ್ನ ಅವನ ಎದುರೇ ಮಾತಾಡ್ಬಿಡ್ತಿದ್ರು, ಒಳ್ಗೆ ಕೆಂಡ ಸುರಿದಷ್ಟು ಕೋಪ ಆಗ್ತಿತ್ತು, ಬಟ್ ಆ ಪಾರ್ಟಿ ಏನೂ ಅಲ್ಲ. ಅನ್ನೋ ಹಾಗೆ ಇದ್ಬಿಡ್ತಿದ್ದ, ಇದು ನನ್ನನ್ನ ಬೆರಗುಗೊಳಿಸ್ತಿತ್ತು,

ಇಂಥಾ ಏನೂ ಅಲ್ಲದಂತೆ ಇದ್ದುಬಿಡುವ ಮನಸ್ಥಿತಿ ಉಂಟಾಗೋಕೆ ಕಾರಣ ಬಹುಶಃ ಇಂತಹ ಶೋಷಣಾತ್ಮಕ ಮಾತುಗಳು ದಿನೇ ದಿನೇ ಇದ್ದದ್ದೇ ಅನ್ನೋ ಭಾವದ್ದಿರಬೇಕು, ತಮ್ಮ ಪೂರ್ವಜರಿಂದಲೂ ಹೀಗೆ ಅನುಮಾನಕ್ಕೊಳಗಾಗಲ್ಪಡುತ್ತಿರುವ ಈ ಒಡನಾಡಿಗಳನ್ನ ಒಂದೇ ಸಮನೆ ಮೂದಲಿಸುತ್ತಲೇ ಬರುತ್ತಿರುವ ನಮ್ಮ ಜನ ಡಿಸ್ಗಸ್ಟಿಂಗ್ ಪೀಪಲ್ ಅನ್ನಿಸ್ಬಿಡ್ತಾರೆ.

ಹೀಗೆ ಮೂದಲಿಕೆಗೊಳಗಾಗಿ ಊರಿಂದಾಚೆಗೆ ಮನೆ ಕಟ್ಟಿಕೊಳ್ಳುತ್ತಾ, ಮುಂದೊಮ್ಮೆ ಅದೊಂದು ಕೇರಿಯಾಗಿ ಮಡಿವಾಳರ ಕೇರಿ ಅಂತ ನಾಮಾಂಕಿತಗೊಳ್ಳುವುದೇನು ಉತ್ಪ್ರೇಕ್ಷೆಯ ಮಾತಲ್ಲ ಬಿಡಿ, ಕೊನೆಗೆ ಆ ಕೇರಿಗೂ ಈ ಕೇರಿಗೂ ವೈರತ್ವ ಶುರುವಾಗಿ ಜಗಳ ದೊಂಬಿ ಗಲಾಟೆಗಳಾಗೋದರ ಬದಲು ಈ ಸಹಿಸಿಕೊಳ್ಳುವ ಮನಸ್ಥಿತಿ ಮತ್ತು ಮೂದಲಿಸುವ ಮನಸ್ಥಿತಿಗಳು ಬದಲಾಗಬೇಕಿದೆ.